ಬಾರ್ಬಿಟ್ಯೂರಿಕ್ ಆಮ್ಲ ಹಾಗೂ ಬಾರ್ಬಿಟ್ಯೂರೇಟುಗಳು

ಬಾರ್ಬಿಟ್ಯೂರಿಕ್ ಆಮ್ಲದ ರಾಸಾಯನಿಕ ಹೆಸರು 2,4,6(1H, 3H, 5H ) ಪರಿಮಿಡೀನ್ ಟ್ರಯೋನ್. ಇದು ಸ್ಫಟಿಕಾಕೃತಿಯ ಬಿಳಿ ಸಂಯುಕ್ತ. ಕುದಿಬಿಂದು 2450ಅ ಇದನ್ನು ಮೆಲೋನಿಕಾ ಆಮ್ಲ ಮತ್ತು ಯೂರಿಯಾದಿಂದ ತಯಾರಿಸುತ್ತಾರೆ.

ಬೇಯರ್ ಇದನ್ನು 1863ರಲ್ಲಿ ಶೋಧಿಸಿ ತನ್ನ ಪ್ರೇಯಸಿ ಬಾರ್ಬಿರಾಳ ನೆನಪಿಗಾಗಿ ಬಾರ್ಬಿಟ್ಯೂರಿಕ್ ಆಮ್ಲ ಎಂದು ಹೆಸರಿಸಿದ್ದರೂ ಇದಕ್ಕೆ ರಾಸಾಯನಿಕ ಮಹತ್ತ್ವ ದೊರೆಯಬೇಕಾದರೆ 40 ವರ್ಷ ಕಾಯಬೇಕಾಯಿತು. 1903ರಲ್ಲಿ ಫಿಶರ್ ಮತ್ತು ಫಾನ್‍ಮೆರಿಂಗ್ ಎಂಬವರು 5.5 ಡೈ ಈಥೈಲ್ ಬಾರ್ಬಿಟ್ಯೂರೇಟನ್ನು ತಯಾರಿಸಿ ಅದಕ್ಕೆ ನಿದ್ರಾಜನಕ ಗುಣಗಳಿವೆ ಎಂಬ ಸಂಗತಿ ಕಂಡುಕೊಂಡರು. ಅಂದಿನಿಂದ ಬಾರ್ಬಿಟ್ಯೂರಿಕ್ ಆಮ್ಲದ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಸಿ ಹೊಸ ಹೊಸ ನಿದ್ರಾಜನಕ ಹಾಗೂ ಉದ್ವೇಗಶಾಮಕ ಮತ್ತು ಕಂಪನನಿವಾರಕ ಔಷಧಗಳ ಶೋಧನೆ ಪ್ರಾರಂಭವಾಯಿತು.

ಬಾರ್ಬಿಟ್ಯೂರಿಕ್ ಆಮ್ಲದಿಂದ ತಯಾರಿಸಿದ ನಿದ್ರಾಜನಕ ಮತ್ತು ಉದ್ವೇಗ ಶಾಮಕ ಔಷಧಗಳಿಗೆ ಬಾರ್ಬಿಟ್ಯೂರೇಟುಗಳು ಎಂದು ಹೆಸರು. ಇವು ಕೇಂದ್ರ ನರಮಂಡಲದ ಚಟುವಟಿಕೆ ಕುಗ್ಗಿಸುತ್ತವೆ. ವಿಶೇಷತಃ ನಿದ್ರಾಕೇಂದ್ರದ ಮೇಲೆ ಪರಿಣಾಮ ಬೀರುತ್ತವೆ. ಸರ್ವೇಸಾಮಾನ್ಯವಾಗಿ ಬಾರ್ಬಿಟ್ಯೂರೇಟುಗಳನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಿದಾಗ ಉದ್ವೇಗಶಾಮಕದಂತೆಯೂ ಅಧಿಕ ಪ್ರಮಾಣದಲ್ಲಿ ಸೇವಿಸಿದಾಗ ನಿದ್ರಾಜನಕದಂತೆಯೂ ವರ್ತಿಸುತ್ತವೆ. ಇವುಗಳಲ್ಲಿ ಮೂರು ಬಗೆಗಳುಂಟು. ಮೊದಲನೆಯ ಬಗೆಯದು ಸಾಮಾನ್ಯ ಶಕ್ತಿ ಇರುವುದಾಗಿದ್ದು ದೀರ್ಘಾವಧಿ ಪರಿಣಾಮ ವ್ಯಕ್ತಪಡಿಸುತ್ತದೆ. ಉದಾಹರಣೆಗೆ ಬಾರ್ಬಿಟಾಲ್ ಮತ್ತು ಫಿನೋಬಾರ್ಬಿಟಾಲ್, ಎರಡನೆಯದ ಬಗೆಯದು ಅಧಿಕ ಶಕ್ತಿಯುತವಾಗಿದ್ದು ಅಲ್ಪಕಾಲಾವಧಿಯ ಪರಿಣಾಮ ಉಂಟುಮಾಡುತ್ತದೆ. ಉದಾಹರಣೆಗೆ ಅಮೋ ಬಾರ್ಬಿಟಾಲ. ಬ್ಯೂಟಾಬಾರ್ಬಿಟಾಲ್, ಮೂರನೆಯ ಬಗೆಯದು ಅತ್ಯಧಿಕ ಶಕ್ತಿಯುತವಾಗಿದ್ದು ಅರ್ಥ ಅಲ್ಪಕಾಲಾವಧಿ ಪರಿಣಾಮ ಬೀರುತ್ತದೆ. ಉದಾಹರಣೆಗೆ ಪೆಂಟೊ ಬಾರ್ಬಿಟಾಲ್ ಮತ್ತು ಸೆಕೊಬಾರ್ಬಿಟಾಲ್.

ನಿದ್ರ್ರಾಜನಕ ಗುಳಿಗೆಗಳನ್ನು ತಯಾರಿಸುವಲ್ಲಿ ಬಾರ್ಬಿಟ್ಯೂರೇಟುಗಳ ಉಪಯೋಗ ಉಂಟು. ಉದ್ವೇಗ ಮಾನಸಿಕ ಗೊಂದಲ, ಭಾವನಾತ್ಮಕ ಒತ್ತಡಗಳನ್ನು ತಡೆದು ನೆಮ್ಮದಿ ಉಂಟುಮಾಡಲು ಇವನ್ನು ಉಪಯೋಗಿಸುತ್ತಾರೆ. ಮೊದಲು ವಿಶ್ರಾಮ ಭಾವನೆ ಉಂಟು ಮಾಡಿ ಸಾವಕಾಶವಾಗಿ ನಿದ್ರೆ ತರಿಸುತ್ತವೆ. ಬಾರ್ಬಿ ಟ್ಯೂರೇಟುಗಳಿಗೆ ವ್ಯಸನಿಯನ್ನಾಗಿಸುವ ದುರ್ಗುಣ ಇರುವುದರಿಂದ ವ್ಯಕ್ತಿ ಇವನ್ನು ನಿಯಮಿತವಾಗಿ ಸೇವಿಸುವ ಚಟಕ್ಕೆ ಬಲಿ ಬೀಳಬಾರದು.						(ಎಸ್.ವೈ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ